ಮೃತ್ಯುಂಜಯಾಚಾರ್ಯ, ಎನ್ ಕೆ
	(1923-) ಶಾಸ್ತ್ರ ಶುದ್ಧವಾದ ಶಿಲಾಶಿಲ್ಪ ಹಾಗೂ ಲೋಹ ಶಿಲ್ಪದಲ್ಲಿ ಸಿದ್ಧ ಹಸ್ತರಾದ ಶಿಲ್ಪಿ. ಜನ್ಮ 1923ರ ಡಿಸೆಂಬರ್ 29 ರಂದು. ತಂದೆ ಎನ್. ಕಸ್ತೂರಾಚಾರ್ಯ, ಆಭರಣ ಕಲೆಯಲ್ಲಿ ಪರಿಣತರು. ಸಂಸ್ಕøತ, ವೇದಾಧ್ಯಯನ, ವೈದಿಕ ಪೌರೋಹಿತ್ಯ ವಂಶ ಪಾರ್ಯಂಪರ್ಯವಾಗಿ ಬಂದುದು. ಮೈಸೂರಿನಲ್ಲಿ ಏಳನೆ ತರಗತಿಯವರೆಗೆ ಅಧ್ಯಯನ. ತಂದೆಯ ಕಲಾಸೃಷ್ಟಿಯಿಂದ ಆಕರ್ಷಿತರಾದ ಆಚಾರ್ಯರಿಗೆ ಬಾಲ್ಯದಲ್ಲೇ ರೇಖಾ ವಿನ್ಯಾಸಗಳ ರಚನೆಯಲ್ಲಿ ಆಸಕ್ತಿ. ಅರಮನೆಯ ಕಲಾವಿದ ಎಲ್. ಲಕ್ಷಣ್ ಕೃಷ್ಣರಾಯರ ಸಾನಿಧ್ಯದಲ್ಲಿ ಚಿತ್ರಕಲೆ, ಮಾಡೆಲಿಂಗ್, ವರ್ಣ ಚಿತ್ರಗಳ ರಚನೆಯಲ್ಲಿ ತರಬೇತಿ. ಅನಂತರ ಚಾಮರಾಜೇಂದ್ರ ತಾಂತ್ರಿಕ ತರಬೇತಿ ಶಾಲೆಯಲ್ಲಿ ಶಿಲ್ಪಕಲಾ ಶಿಕ್ಷಣ. ಆರಂಭದಲ್ಲಿ ರಜತ ಕಲಾ ಪ್ರವೀಣ ಅಂಕಪ್ಪಾ ಚಾರ್ಯರ ಬಳಿ, ನಕಾಶೆ ಕೆಲಸ ಉಬ್ಬು ಶಿಲ್ಪಗಳ ರಚನೆಯ ವಿಧಾನದಲ್ಲಿ ತರಬೇತಿ (1943) ಆನಂತರ ಸ್ವರ್ಣಕಲಾನಿಪುಣರಾದ ಸಿಂಗಣ್ಣಾ ಚಾರ್ಯರಲ್ಲಿ (1945-60) 15 ವರ್ಷಗಳ ಶಿಷ್ಯ ವೃತ್ತಿ, ಇದು ಭವಿಷ್ಯ ಜೀವನವನ್ನು ರೂಪಿಸಿದ ಅವಧಿ. ಮೈಸೂರು ಅರಮನೆಯ, ಚಿನ್ನದ ಅಂಬಾರಿ, ರತ್ನ ಸಿಂಹಾಸನ, ಬೆಳ್ಳಿರಥ, ದಸರಾ ಉತ್ಸವ ಕಾಲದಲ್ಲಿ ಬಳಸುವ ರತ್ನಖಚಿತ ಚಿನ್ನದ, ಅತ್ತರದಾನಿ, ಹರಿವಾಣ, ಹಫ್ತರ್‍ದಾನಿಗಳು ಮೊದಲಾದ ಪೂಜಾ ಪಾತ್ರೆಗಳನ್ನು ರಚಿಸಿದವರು ಸಿಂಗಣ್ಣಾಚಾರ್ಯರು. ಇಂತಹ ಮಹಾಶಿಲ್ಪಿಯ ಸಾನ್ನಿಧ್ಯದಲ್ಲಿ ಸ್ವರ್ಣ ಶಿಲ್ಪಗಳ, ಶಿಲಾ ಶಿಲ್ಪಗಳ ನಿರ್ಮಾಣ ಕೌಶಲದ ಮರ್ಮವನ್ನವರಿತರಲ್ಲದೆ, ಶಿಲ್ಪ ಶಾಸ್ತ್ರದ ಬಗೆಗೆ ಪೂರ್ಣ ಮಾರ್ಗದರ್ಶನ ಪಡೆದರು. ವೈದಿಕ ವಿದ್ಯಾಭೂಷಣ ಎಂ. ಗಂಗಾಧರಮೂರ್ತಿ, ಹಾಗೂ ವೇದ ಶಾಸ್ತ್ರೋಜ್ಜಿವಿನಿ ಸಭೆ. ಮೈಸೂರು, ಇಲ್ಲಿ ವೈದಿಕ ಹಾಗೂ ಸಂಸ್ಕøತ ಶಿಕ್ಷಣ ಪಡೆದರು. ರೇಖಾ ಚಿತ್ರಕಲೆಯಲ್ಲಿ, ಮಾಡಲಿಂಗ್‍ನಲ್ಲಿ ಸಿದ್ಧ ಹಸ್ತರಾದ ಮೃತ್ಯುಂಜಯಚಾರ್ಯರು, ಹಲವಾರು ರೇಖಾ ಚಿತ್ರಗಳನ್ನು ರಚಿಸಿದ್ದಾರೆ. ಅವರ ಸಂಗ್ರಹದಲ್ಲಿ ಇದ್ದ ಅವರ ತಾಯಿಯವರ ರೇಖಾ ಚಿತ್ರ ಜೀವಂತ ಕಳೆಯಿಂದ ಕೂಡಿದ ಚಿತ್ರ. ಗಾಯತ್ರಿ ಶುದ್ಧ ಶಾಸ್ತ್ರೀಯ ಸುಂದರ ರೇಖಾ ವಿನ್ಯಾಸ.	

	ಮೃತ್ಯುಂಜಯಚಾರ್ಯರು ರಚಿಸಿದ ಶಿಲ್ಪಗಳು, ಪೂಜಾ ಪಾತ್ರೆಗಳು ರಾಜ್ಯ, ಹಾಗೂ ನೆರೆಯ ರಾಜ್ಯದ ದೇವಾಲಯಗಳಲ್ಲಿ ಗುರು ಮಂದಿರಗಳಲ್ಲಿವೆ. ಹೊಸಪೇಟೆಯ ಗೀತಾಶ್ರಮಕ್ಕೆ ರಚಿಸಿ ಕೊಟ್ಟ, ಗೀತಾಬೋಧ, ದಕ್ಷಿಣ ಕನ್ನಡದ ಅಶ್ವತ್ಥಪುರಕ್ಕೆ ಮಾಡಿಕೊಟ್ಟ ಕೃಷ್ಣ ಶಿಲೆಯ ವೀರಾಂಜನೇಯ, ದಾವಣಗೆರೆ ರಾಘವೇಂದ್ರ ಮಠಕ್ಕೆ ಮಾಡಿಕೊಟ್ಟ ನಾಗಕನ್ಯೆ ಬಳ್ಳಾರಿ ದೇವಸ್ಥಾನಕ್ಕೆ ಮಾಡಿಕೊಟ್ಟ ಸುಬ್ರಹ್ಮಣ್ಯಸ್ವಾಮಿ,- ಇವು ಮೃತ್ಯುಂಜಯಾಚಾರ್ಯರು ನಿರ್ಮಿಸಿದ ಸುಂದರ ಶಿಲಾ ಮೂರ್ತಿಗಳು.

	ಅಶ್ವತ್ಥಪುರದ ದೇವಾಲಯದ ಬಂಗಾರದ ಕಿರೀಟ, ಉಡುಪಿ ಸೋದೆಮಠಕ್ಕೆ ತಯಾರಿಸಿಕೊಟ್ಟ ಬಂಗಾರದ ಮಂಟಪ, ಸುರತ್ಕಲ್ ದೇವಸ್ಥಾನಕ್ಕೆ ಹಾಗೂ ಸುಬ್ರಹ್ಮಣ್ಯ ಸ್ವಾಮಿ ದೇವರ ಕವಚ, ಮಂಗಳೂರಿನ ವೆಂಕಟರಮಣ ದೇವಾಲಯ, ಮಂಗಳಾದೇವಿ ದೇವಸ್ಥಾನದ ಪ್ರಭಾವಳಿ ಮತ್ತು ಸಂಪುಟ, ಕಾಳಿಕಾಂಬ ದೇವಾಲಯಕ್ಕೆ ಮಾಡಿಕೊಟ್ಟ ಪುಷ್ಪಕನ್ನಡಿ, ಇವು ಕೆಲವು ಬೆಳ್ಳಿ ಬಂಗಾರ, ರತ್ನಗಳಿಂದ ಮಾಡಿದ ಸುಂದರ ಕಲಾಕೃತಿಗಳು.

	ಮೃತ್ಯುಂಜಯಾಚಾರ್ಯರಿಗೆ, ಸಾರ್ವಜನಿಕ ಸಂಸ್ಥೆಗಳಿಂದ, ಸಂದ ಪ್ರಶಸ್ತಿಗಳು ಹಲವಾರು, ಕೊಡೆಕ್ಕಾರು ಸಂಸ್ಥೆಯಿಂದ ಶಿಲ್ಪ ಶಿರೋಮಣಿ, ಗೌರವ ದೊರೆತಿದೆ, ಮಂಜೇಶ್ವರದ ಗುರುಮಠ ಕ್ಷೇತ್ರಕ್ಕೆ ನಿರ್ಮಿಸಿದ ಕಾಳಿಕಾ ಪರಮೇಶ್ವರಿಯ ಅಪೂರ್ವ ಶಿಲ್ಪ ಇವರಿಗೆ, ಮಾನಶಿಲ್ಪ ರತ್ನಂ ಪ್ರಶಸ್ತಿಗೆ ಕಾರಣವಾಯಿತು.

	ತಮ್ಮ ಶಿಲಾ, ರಜತ, ಸ್ವರ್ಣ ಶಿಲ್ಪಗಳಿಂದ ಕಲಾಕ್ಷೇತ್ರಕ್ಕೆ ವಿಶಿಷ್ಟ ಸೇವೆ ಸಲ್ಲಿಸಿರುವ ಆಚಾರ್ಯರಿಗೆ ಸಂದಿರುವ ಪ್ರಶಸ್ತಿಗಳು ಹಲವಾರು. ಮೈಸೂರು ರೋಟರಿ ರಾಮಸನ್ಸ್ ಕಲಾ ಪ್ರತಿಷ್ಠಾನದ ಪ್ರಶಸ್ತಿ (1997) ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ (1977) ಕರ್ನಾಟಕದ ಅತ್ಯುನ್ನತ ಜಕಣಾಚಾರಿ ಪ್ರಶಸ್ತಿ (2002) ಇವರ ಕಲಾಕೌಶಲಕ್ಕೆ ಹಿಡಿದ ಕೈಗನ್ನಡಿ.		
										
(ಆರ್.ಡಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ